ಊಲಂಟ್, ಯೋಹನ್ ಲುಡ್‍ವಿಗ್

	1787-1862. ಜರ್ಮನ್ ಸಾಹಿತ್ಯ ಚರಿತ್ರೆಯಲ್ಲಿ ಖ್ಯಾತನಾಮರಾದ ಕವಿ ಶ್ರೇಣಿಗೆ ಸೇರಿದವ. ಆದರೂ ಈತನ ಕಾವ್ಯಧಾರೆ ಅಲ್ಪಕಾಲದ್ದಾಗಿತ್ತು. 1834ರ ಅನಂತರದ ಕಾಲದಲ್ಲಿ ಕಾವ್ಯಸ್ಫೂರ್ತಿ ಪ್ರಕಾಶಕ್ಕೆ ಬರದೇ ಹೋಯಿತು. ಕೊನೆಯ ವರ್ಷಗಳಲ್ಲಿ ಈತ ಭಾಷಾಶಾಸ್ತ್ರದ ಅಧ್ಯಯನವನ್ನು ಮಾತ್ರ ಮುಂದುವರಿಸಿದ. ಜರ್ಮನಿಯ ಪ್ರಾಚೀನ ಕವಿಗಳು ಮತ್ತು ಪ್ರಾಚೀನ ಕಾವ್ಯಗಳ ವಿಮರ್ಶೆ ನಡೆಯುತ್ತಿದ್ದ ಕಾಲವದು. ಅದರಲ್ಲಿ ಈತನ ಆಸಕ್ತಿ ಮತ್ತು ಅಧ್ಯವ್ಯವಸಾಯ ಹೆಚ್ಚಿನದಾಗಿದೆ. 1822ರಲ್ಲಿ ಈತ ಪ್ರಕಟಿಸಿದ ಫ್ರಾನ್ಸ್ ದೇಶದ ಆಷನ್ ಇತಿಹಾಸ ಕಾವ್ಯಗಳನ್ನು ಕುರಿತು- ಎಂಬ ಪ್ರಬಂಧ ಈತನ ವಿದ್ಯಾಪ್ರೌಢಿಮೆಯನ್ನು ಎತ್ತಿತೋರಿಸುತ್ತದೆ. ಕಾವ್ಯ, ಕಾವ್ಯದ ಇತಿಹಾಸ, ನಾಟಕ ರಚನೆ, ವಿರ್ಮಶೆಗಳೇ ಈತನ ವಿಶಿಷ್ಟವಾದ ಗುಣಗಳಲ್ಲ. ರಾಜಕಾರಣದಲ್ಲೂ ಪಾತ್ರವಹಿಸಿದ ಈತ ಸುಧಾರಕರ ಗುಂಪಿಗೆ ಸೇರಲು ಅರ್ಹನಾಗಿದ್ದಾನೆ. 1812-1814ರ ಕಾಲದಲ್ಲಿ ಸ್ವೇಬಿಯ ಪ್ರಾಂತ್ಯದ ನ್ಯಾಯಮಂತ್ರಿಯ ಕಾರ್ಯದರ್ಶಿಯಾಗಿ ಈತ ಕೆಲಸ ಮಾಡಿದ. ಇದಕ್ಕೆ ಮೊದಲು ಟೀಬಿಂಗೆನ್ ನಗರವನ್ನು ಪ್ರಾಂತ್ಯಶಾಸನಸಭೆಯಲ್ಲಿ ಪ್ರತಿನಿಧಿಸಿದ್ದ.

	ಟೀಬಿಂಗೆನ್ ವಿಶ್ವವಿದ್ಯಾನಿಲಯದ ಕಾರ್ಯದರ್ಶಿಯ ಪುತ್ರನಾಗಿ ಜನಿಸಿ, ಟೀಬಿಂಗೆನ್ ವಿದ್ಯಾಲಯದಲ್ಲೂ ಅನಂತರ ಹೀಡೆಲ್‍ಬರ್ಗ್ ಮತ್ತು ಪ್ಯಾರಿಸ್ ನಗರಗಳಲ್ಲೂ ಈತ ಕಾಯಿದೆಯ ಅಭ್ಯಾಸ ಮಾಡಿದ. ಕಾವ್ಯಗಳಿಂದ ಉತ್ತೇಜಿತನಾಗಿ ತನ್ನ 20ನೆಯ ವರ್ಷದಿಂದಲೇ ಕಾವ್ಯರಚನೆಯನ್ನು ಪ್ರಾರಂಭಿಸಿದನೆಂದು ತಿಳಿದುಬರುತ್ತದೆ. ನ್ಯಾಯಶಾಸ್ತ್ರವನ್ನು ಅಭ್ಯಾಸ ಮಾಡುತ್ತಿರುವಾಗಲೇ ಪ್ರಾಚೀನ ಮತ್ತು ಮಧ್ಯಕಾಲದ ಕಾವ್ಯ ಮತ್ತು ಕಾವ್ಯಶಾಸ್ತ್ರಾಧ್ಯಯನವನ್ನೂ ಮುಂದುವರಿಸಿದ. ಪ್ಯಾರಿಸ್ ನಗರದಲ್ಲಿದ್ದ ಕಾಲದಲ್ಲಿ ಅಲ್ಲಿಯ ಪ್ರಸಿದ್ಧವಾದ ನ್ಯಾಷನಲ್ ಬಿಬ್ಲಿಯೋಥೆಕ್ ಗ್ರಂಥಭಂಡಾರ ಈತನ ಕಾವ್ಯ ವಿಮರ್ಶಾಧ್ಯಯನಕ್ಕೆ ಪುಷ್ಟಿಯನ್ನು ನೀಡಿತೆಂದು ಜರ್ಮನ್ ಸಾಹಿತ್ಯಾಭ್ಯಾಸಿಗಳು ಹೇಳಿದ್ದಾರೆ. ಸ್ವದೇಶಕ್ಕೆ ಮರಳಿದ ಮೇಲೆ ಟೀಬಿಂಗೆನ್ ವಿಶ್ವವಿದ್ಯಾನಿಲಯದಲ್ಲೇ ನ್ಯಾಯಶಾಸ್ತ್ರಾಧ್ಯಾಪಕನಾದ. ರಾಜಕೀಯದಲ್ಲಿ ಭಿನ್ನಾಭಿಪ್ರಾಯವುಳ್ಳವನಾಗಿ ಆ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟು ಪ್ರತಿನಿಧಿಸಭೆಗೆ ಆಯ್ಕೆಯಾದ. ಪ್ರತಿನಿಧಿಯಾಗಿದ್ದ ಕಾಲದಲ್ಲಿ ಯಾವ ಕಾವ್ಯವನ್ನೂ ನಿರ್ಮಿಸಲಾಗಲಿಲ್ಲ. 1819ರಿಂದ 1829ರ ವರೆಗೆ ಕಾವ್ಯರಚನೆ ನಡೆಯಲಿಲ್ಲ. ಮುಂದೆ 1829ರಿಂದ 1834ರ ವರೆಗೆ ಮಾತ್ರ ಈತನಿಗೆ ಆ ಕೆಲಸ ಸಾಧ್ಯವಾಯಿತು.

	ಈತ ಐತಿಹಾಸಿಕ ಲಾವಣಿಗಳಿಗಾಗಿ ಪ್ರಸಿದ್ಧಿ ಪಡೆದಿದ್ದಾನೆ. 1815 ಮತ್ತು 1817ರಲ್ಲಿ ಪಿತೃಭೂಮಿಯ ಕವಿತೆಗಳು ಎಂಬ ಜಾನಪದ ಗೀತಸಂಕಲನಗಳನ್ನು ಪ್ರಕಟಿಸಿದ. ಈತನ ಸ್ವಂತ ರಚನೆಗಳೆಂದರೆ ಪರಿವ್ರಾಜಕ, ಎಡೆನ್‍ಹಾಲನ ಅದೃಷ್ಟ- ಮುಂತಾದವು.

	ರಾಜಕೀಯ ಕವಿಯನ್ನು ನುಂಗಿ ನೀರು ಕುಡಿಯುತ್ತದೆ-ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಊಲಂಟನ ವಿಷಯದಲ್ಲಂತೂ ಇದು ಸರ್ವವಿಧದಲ್ಲೂ ಸರಿಯಾದ ಮಾತು.						  
   (ಕೆ.ಕೆ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ